ಸಾಬರಮತಿ ಆಶ್ರಮ-
	ಗಾಂಧೀಜಿ ಸ್ಥಾಪಿಸಿದ ಪ್ರಪಂಚ ಪ್ರಸಿದ್ಧ ಆಶ್ರಮ. ಗುಜರಾತ್ ಹತ್ತಿರವಿರುವ ಕೋಜಾಟ್ ಎಂಬಲ್ಲಿ ಗೆಳೆಯ ಜೀವನ್‍ಲಾಲ್ ದೇಸಾಯಿಯವರ ಬಂಗಲೆಯನ್ನು ಬಾಡಿಗೆಗೆ ತೆಗೆದು ಕೊಂಡು 1915 ಮೇ 25 ರಂದು ಈ ಆಶ್ರಮವನ್ನು ಇವರು ಆರಂಭಿಸಿದರು. ಈ ಆಶ್ರಮಕ್ಕೆ ಸತ್ಯಾಗ್ರಹ ಆಶ್ರಮವೆಂದು ಹೆಸರಿಡಲಾಗಿತ್ತು. ಸತ್ಯಪ್ರಿಯತೆ ಹಾಗೂ ಮಾತೃಭೂಮಿಯ ಸೇವೆ ಈ ಆಶ್ರಮವಾಸಿಗಳ ಮುಖ್ಯ ಗುರಿಗಳಾಗಿದ್ದುವು. ಸತ್ಯ, ಅಹಿಂಸೆ, ಬ್ರಹ್ಮಚರ್ಯ, ನೂಲುವುದು, ನೇಯುವುದು-ಇವು ಇವರ ಮುಖ್ಯಕಾರ್ಯಕ್ರಮಗಳು.

	1917ರಲ್ಲಿ ಅಹಮದ್‍ನಗರದಿಂದ ಉತ್ತರಕ್ಕೆ 6 ಕಿಮೀ ದೂರದಲ್ಲಿ ರುವ ಸಾಬರಮತಿ ನದಿ ದಂಡೆಯಮೇಲೆ ಈ ಆಶ್ರಮವನ್ನು ಸ್ಥಳಾಂತರಿಸ ಲಾಯಿತು. ಇದರಿಂದ ಸಾಬರಮತಿ ಆಶ್ರಮವೆಂದು ಹೆಸರಾಯಿತು. ಗಾಂಧೀಜಿ ರಾಜನೈತಿಕ ಜೀವನವನ್ನು ರೌಲಟ್ ಕಾಯಿದೆಯ ಚಳವಳಿಯ ಸಂದರ್ಭದಿಂದ ಆರಂಭಿಸಿದರು. ಲೋಕಮಾನ್ಯ ಟಿಳಕರು ನಿಧನರಾದ ಅನಂತರ ಸಮಗ್ರಭಾರತದ ನಾಯಕರಾಗಿ ಚಳವಳಿಯಲ್ಲಿ ದುಮುಕಿದಾಗ ಈ ಆಶ್ರಮವೇ ಅವರ ನಿವಾಸವಾಯಿತು. 1931ರಲ್ಲಿ ಆಶ್ರಮವನ್ನು ಬಿಟ್ಟು ಮಧ್ಯಪ್ರಾಂತದ ಸೇವಾಗ್ರಾಮಕ್ಕೆ ತೆರಳಿದರು. ಇವರು ಸಾಬರಮತಿ ಆಶ್ರಮದಲ್ಲಿದ್ದಾಗ ಪ್ರಪಂಚದ ಎಲ್ಲೆಡೆಯಿಂದ ಬರುವ ಜನರಿಗೆ ಇದೊಂದು ಯಾತ್ರಾಸ್ಥಳವಾಗಿತ್ತು. ಇಲ್ಲಿಯ ಪ್ರದರ್ಶನಾಲಯದಲ್ಲಿ ಗಾಂಧೀಜಿಯವರು ಬಳಸುತ್ತಿದ್ದ ವಸ್ತುಗಳು, ಗ್ರಂಥಾಲಯಗಳನ್ನು ನೋಡಬಹುದು.						
		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
			(ಜಿ.ಬಿ.ಆರ್.)